ಗ್ರೇಟ್ ಬ್ಯಾರಿಯರ್ ರೀಫ್ ವಿಶ್ವದ ದೊಡ್ಡ ಹವಳದ ಬಂಡೆಯ ವ್ಯವಸ್ಥೆಯಲ್ಲಿ 2,900 ಪ್ರತ್ಯೇಕ ದಿಬ್ಬಗಳು ಮತ್ತು ಸುಮಾರು 344.400 ಚದರ ಕಿಲೋಮೀಟರ್ನಷ್ಟು ವಿಸ್ತೀರ್ಣವಿದ್ದು (133,000 ಚದರ ಮೈಲಿ ಮೇಲೆ 2,300 ಕಿಲೋಮೀಟರ್ (1,400 ಮೈಲಿ) ವಿಸ್ತಾರವಾಗಿ ಹಬ್ಬಿರುವುದು. ಇದು 900 ದ್ವೀಪಗಳ ಸಂಯೋಜನೆ ಹೊಂದಿದೆ. ). ಈ ಹವಳದ ದಿಬ್ಬಗಳು ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್‍ನ ಸಮುದ್ರದ ಕರಾವಳಿಯಲ್ಲಿದೆ ಇದೆ.
ಗ್ರೇಟ್ ಬ್ಯಾರಿಯರ್ ರೀಫ್‍ನ್ನು ಬಾಹ್ಯಾಕಾಶದಿಂದ ಕಾಣಬಹುದು ಮತ್ತು ಇದು ಸೂಕ್ಷ್ಮ ಜೀವಿಗಳು ನಿರ್ಮಿಸಿದ ವಿಶ್ವದ ದೊಡ್ಡ ಏಕೈಕ ರಚನೆಯಾಗಿದೆ. ಈ ದಿಬ್ಬಗಳ ಸಾಲಿನ ರಚನೆ ಸಂಯೋಜನೆಯು ಶತಕೋಟಿ ಹವಳದ ಹುಳುಗಳೆಂಬ ಎಂಬ ಪುಟ್ಟ ಜೀವಿಗಳಿಂದ ನಿರ್ಮಿತಗೊಂಡಿದೆ. ಇದು ಒಂದು ವ್ಯಾಪಕ ವೈವಿಧ್ಯತೆಯ ಜೀವಜಾಲದ ಬದುಕನ್ನು ತೋರಿಸುತ್ತದೆ. ಅದಕ್ಕಾಗಿ 1981 ರಲ್ಲಿ ವಿಶ್ವ ಪರಂಪರೆಯ ತಾಣ ವೆಂದು ಇದನ್ನು ಆಯ್ಕೆಮಾಡಿದರು ಸಿಎನ್ಎನ್ ವಿಶ್ವದ ಏಳು ನೈಸರ್ಗಿಕ ಅದ್ಭುತಗಳಲ್ಲಿ ಒಂದು ಎಂದು ಗುರತು (ಲೇಬಲ್) ಮಾಡಲ್ಪಟ್ಟಿದೆ. ಕ್ವೀನ್ಸ್ಲ್ಯಾಂಡ್ ನ ರಾಷ್ಟ್ರೀಯ ಟ್ರಸ್ಟ್, ಇದನ್ನು ಕ್ವೀನ್ಸ್ಲ್ಯಾಂಡ್ ರಾಜ್ಯದ ವಿಶಿಷ್ಟ ಸ್ಥಳ ಎಂದು ಹೆಸರಿಸಿದೆ.[೧]
ಈ ಶ್ರೇಣಿಯ ಒಂದು ದೊಡ್ಡ ಭಾಗವನ್ನು ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಮೊದಲಾದ ಮಾನವ ಬಳಕೆಯ, ಪ್ರಭಾವದಿಂದ ರಕ್ಷಿಸಲು ಸೀಮಿತಗೊಳಿಸಲು “ಗ್ರೇಟ್ ಬ್ಯಾರಿಯರ್ ರೀಫ್ ಸಾಗರ ಪಾರ್ಕ್” ಮಾಡಿ , ರಕ್ಷಣೆ ಮಾಡಲಾಗಿದೆ. ರೀಫ್ ಮತ್ತು ಅದರ ಪರಿಸರ ವ್ಯವಸ್ಥೆಯ ಮೇಲೆ ಇತರ ಪರಿಸರೀಯ ಒತ್ತಡಗಳ ಪ್ರಭಾವ, ಹವಾಮಾನ ಬದಲಾವಣೆಗಳಿಂದ ಬಹಳಷ್ಟು ಹವಳಗಳು ಬಿಳುಪು ಗೊಡಿದೆ. ಮತ್ತು ನಕ್ಷತ್ರ ಮೀನುಗಳ (ಸ್ಟಾರ್ಫಿಶ್) ಚಕ್ರೀಯ ಸಂಖ್ಯೆ ಏಕಾಏಕಿ ಏರಿವೆ. ನ್ಯಾಷನಲ್ ಅಕ್ಯಾಡೆಮಿ ಆಫ್ ಸೈನ್ಸಸ್ ಆಫ್ ಅಕ್ಟೋಬರ್ 2012 ರಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಈ ಹವಳ ಶ್ರೇಣಿ (ರೀಫ್) 1985 ರಿಂದ ಅರ್ಧಕ್ಕಿಂತ ಹೆಚ್ಚು ತನ್ನ ಹವಳದ ಮೇಲು ಪದರವನ್ನು ಕಳೆದುಕೊಂಡಿದೆ.[೨]
ಗ್ರೇಟ್ ಬ್ಯಾರಿಯರ್ ರೀಫ್ ವಿಚಾರ ದೀರ್ಘ ಕಾಲದಿಂದ ಆಸ್ಟ್ರೇಲಿಯನ್ ಮತ್ತು ಮೂಲನಿವಾಸಿಗಳಿಗೆ ತಿಳಿದಿತ್ತು. ಟೋರೆಸ್ ಜಲಸಂಧಿಯ ದ್ವೀಪದ ಜನರು ಇದನ್ನು ಬಳಸುತ್ತಿದ್ದರು. ಸ್ಥಳೀಯ ಜನಾಂಗ ಮತ್ತು ಸಂಸ್ಕೃತಿಗಳ ಆಧ್ಯಾತ್ಮದ ಒಂದು ಪ್ರಮುಖ ಭಾಗವಾಗಿದೆ. ಬಂಡೆಯ ವಿಶೇಷವಾಗಿ ವಿಟ್ಸಂಡೆ ದ್ವೀಪ ಮತ್ತು ಕೈರ್ನ್ಸ್ ಪ್ರದೇಶಗಳು ಪ್ರವಾಸಿಗರಿಗೆ ಒಂದು ಜನಪ್ರಿಯ ತಾಣವಾಗಿದೆ. ಪ್ರವಾಸೋದ್ಯಮದಿಂದ ವರ್ಷಕ್ಕೆ $ 3 ಶತಕೋಟಿ ಆದಾಯವಿದ್ದು, ಈ ಪ್ರದೇಶಲ್ಲಿ ಪ್ರವಾಸೋದ್ಯಮ ಮುಖ್ಯ ಆರ್ಥಿಕ ಚಟುವಟಿಕೆಯಾಗಿದೆ.[೩]
ನವೆಂಬರ್ 2014 ರಲ್ಲಿ, ಗೂಗಲ್ ಗ್ರೇಟ್ ಬ್ಯಾರಿಯರ್ ರೀಫ್ ನ 3ಡಿ ಆಯಾಮದ ಗೂಗಲ್ ಅಂಡರ್ವಾಟರ್ ಸ್ಟ್ರೀಟ್ ವ್ಯೂಅನ್ನು ಆರಂಭಿಸಿತು. ಮಾರ್ಚ್ 2016 ಒಂದು ವರದಿಯಂತೆ ಹವಳದ ಬಿಳುಪು ಬಣ್ಣಕ್ಕೆ ಬದಲಾಯಿಸುತ್ತರುವುದು ಗಂಭೀರ ವಿಚಾರವಾಗಿದೆ. ಸಾಗರ ತಾಪಮಾನ ಬಿಸಿಯಾಗುವಿಕೆ (ವಾರ್ಮಿಂಗ್) ಪರಿಣಾಮವಾಗಿ ಹವಳ ಶ್ರೇಣಿಗಳ ಉತ್ತರ ಭಾಗಗಳು ಬಾದೆಗೆ ಒಳಗಾಗಿವೆ. ಹಿಂದೆ ಅಂದುಕೊಂಡದಕ್ಕಿಂತ ಹಾನಿ ಹೆಚ್ಚು ವ್ಯಾಪಕವಾಗಿದೆ’ ಎಂದು ಹೇಳಿದ್ದಾರೆ. [13] ಅಕ್ಟೋಬರ್ 2016 ರಲ್ಲಿ, ಔಟ್’ಸೈಡ್ ಪತ್ರಿಕೆ ಈ ಹವಳ ಬಂಡೆಯ ನಿಧನಕ್ಕೆ ಒಂದು ಸಂತಾಪ ಪ್ರಕಟಿಸಿತ್ತು. ಆದರೆ ಆ ಲೇಖನ ಅಕಾಲಿಕ ಹಾಗೂ ಹವಳ ಬಂಡೆಗಳ ಪುನರ್ ಜೀವಿಕತ್ವ ಹೆಚ್ಚಿಸುವಂತೆ ಮಾಡುತ್ತಿರುವ ಪ್ರಯತ್ನಗಳಿಗೆ ತೊಂದರೆಯಾಗುವುದು ಎಂದು ಟೀಕಿಸಿದರು.[೪]
ಭಾರತ ದೇಶದ ಹಿಮಾಲಯ ಪರ್ವತ ಶ್ರೇಣಿಯಂತೆ, ಆಸ್ಟ್ರೇಲಿಯಾದ ಈ ಹವಳದ ದಿಬ್ಬಗಳು ಅದರ ಪರಂಪರೆಗೆ ಕೀರ್ತಿ ವಿಷಯ. ಜಗತ್ತಿನ ನೈಸರ್ಗಿಕ ಅದ್ಭುತಗಳಲ್ಲಿ ಕ್ವೀನ್ಸ್‌ಲ್ಯಾಂಡ್ ಕರಾವಳಿಯ ಹವಳದ ದಿಬ್ಬಗಳೂ ಸೇರಿವೆ. ವಿಶ್ವದ ಅತ್ಯಂತ ದೊಡ್ಡ ಹವಳ ದಿಬ್ಬದ ವ್ಯವಸ್ಥೆ ಇದು. ಅತಿ ವೈವಿಧ್ಯಮಯ ಜೀವಸಂಕುಲಕ್ಕೆ ಆಶ್ರಯ ನೀಡಿರುವ ಪ್ರಮುಖ ಭೌಗೋಳಿಕ ವಲಯವಿದು. ಅಷ್ಟೇಅಲ್ಲ, ದೇಶದ ಸಾಂಸ್ಕೃತಿಕ, ಆರ್ಥಿಕ ಮತ್ತು ಸಾಮಾಜಿಕ ವಿಷಯದ ಮೇಲೂ ಬಹಳ ಪ್ರಭಾವ ಬೀರಿವೆ. ಆಸ್ಟ್ರೇಲಿಯಾದ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿರುವ ‘ದಿ ಗ್ರೇಟ್ ಬ್ಯಾರಿಯರ್ ರೀಫ್’ಗೆ ಇರುವುದು ಬರೋಬ್ಬರಿ ಎರಡು ಕೋಟಿ ಐವತ್ತು ಲಕ್ಷ ವರ್ಷಗಳ ದೀರ್ಘ ಇತಿಹಾಸ. 1,400 ಮೈಲು ಉದ್ದದ 3.44 ಲಕ್ಷ ಚದರ ಕಿಮೀ ವ್ಯಾಪ್ತಿಯ ಪ್ರದೇಶದವರೆಗೆ ಲೆಕ್ಕವಿಲ್ಲದಷ್ಟು ಅಚ್ಚರಿಗಳನ್ನು ಒಳಗೊಂಡು ವ್ಯಾಪಿಸಿರುವ ಈ ಹವಳದ ದಿಬ್ಬಗಳು ಜಗತ್ತಿನ ನೈಸರ್ಗಿಕ ಅದ್ಭುತಗಳಲ್ಲಿ ಒಂದು. ಇದು ಈಗ ಅಪಾಯದಲ್ಲಿದೆ ಎಂಬ ಸೂಚನೆ ಕಾಣುತ್ತಿದೆ.
ಇಂಥದ್ದೊಂದು ಆತಂಕ ದಶಕಗಳ ಹಿಂದೆಯೇ ಹುಟ್ಟಿಕೊಂಡಿತ್ತು. ಆ ಕುರಿತ ಚರ್ಚೆ ಈಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಕಾರಣ,ವಿಜ್ಞಾನಿಗಳ ವಲಯ ಈ ಅತ್ಯಮೂಲ್ಯ ಹವಳದ ದಿಬ್ಬಗಳ ಮರಣ ಸಂಭವಿಸುತ್ತದೆ ಎಂದು ಘೋಷಿಸಿರುವುದು. ಆಸ್ಟ್ರೇಲಿಯಾದ ಉತ್ತರ ಮತ್ತು ಪೂರ್ವ ಕರಾವಳಿಯ ಉದ್ದಕ್ಕೂ ಬಣ್ಣದ ಚಿತ್ರದಂತೆ ಹಬ್ಬಿರುವ ಈ ಹವಳದ ದಿಬ್ಬಗಳು ವೇಗವಾಗಿ ಬಿಳಿಚಿಕೊಳ್ಳುತ್ತಿವೆ. ಹವಳಗಳು ಜೀವ ಕಳೆದುಕೊಳ್ಳುತ್ತಿವೆ. ಕಾಲಾಂತರದಲ್ಲಿ ಉಂಟಾದ ತಾಪಮಾನ ಬದಲಾವಣೆಗಳು, ಮಾನವ ಚಟುವಟಿಕೆ, ಎಲ್‌ನಿನೊದಂತಹ ನೈಸರ್ಗಿಕ ಹೊಡೆತಗಳು ದಿಬ್ಬಗಳ ಅಸ್ತಿತ್ವಕ್ಕೆ ಅದರಲ್ಲಿರುವ ಹವಳದ ಹುಳುಗಳ ಜೀವಕ್ಕೆ ಸಂಚಕಾರ ತಂದಿವೆ. ಸಮುದ್ರದ ನೀರೇ ಅಪಾಯಕಾರಿಯಾಗಿ ಪರಿಣಮಿಸಿದೆ.
ನೈಸರ್ಗಿಕ ಕಾರಣಗಳು ಮತ್ತು ಮಾನವರ ದುರಾಸೆ ಹವಳದ ದಿಬ್ಬಗಳ ಮರಣ ಶಾಸನಕ್ಕೆ ಮುಖ್ಯವಾಗಿ ಕಾರಣ. ಇದು ಆಸ್ಟ್ರೇಲಿಯಾದ ಅರ್ಥ ವ್ಯವಸ್ಥೆ, ಪರಿಸರ ಮತ್ತು ಬೃಹತ್ ಜೀವ ಜಾಲಕ್ಕೆ ಕುತ್ತು ತರುತ್ತಿರುವುದರಿಂದ ಆತಂಕ ಹೆಚ್ಚಾಗಿದೆ. ಬಹುತೇಕ ಭಾಗಗಳನ್ನು ಮುಪ್ಪು ಆವರಿಸಿದೆಯಾದರೂ, ಎಲ್ಲವೂ ಜೀವ ಕಳೆದುಕೊಂಡಿಲ್ಲ ಎಂದು ವಿಜ್ಞಾನಿಗಳು ಸಮಾಧಾನ ಪಡುತ್ತಿದ್ದಾರೆ. ದೀರ್ಘಾವಧಿಯ ತಾಪಮಾನ ವೈಪರೀತ್ಯ, ಕಡಲ ನೀರಿನ ಆಮ್ಲೀಯ ಗುಣ ಜಗತ್ತಿನಾದ್ಯಂತ ಹವಳಗಳ ಉಳಿವಿಗೆ ಬಹುದೊಡ್ಡ ಬೆದರಿಕೆಗಳಾಗಿದ್ದರೂ ಈ ಪರಿಸರ ವ್ಯವಸ್ಥೆ ಚೇತರಿಸಿಕೊಳ್ಳಲಿದೆ ಎಂಬ ವಿಶ್ವಾಸ ಅವರದು. ‘ಪೆಸಿಫಿಕ್‌ನ ಕ್ರಿಸ್‌ಮಸ್ ದ್ವೀಪದ ಹವಳಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿದ್ದೇನೆ. ಶೇ 85ರಷ್ಟು ಹವಳಗಳು ಜೀವ ಕಳೆದುಕೊಂಡಿವೆ. ಈಗ ಅದೊಂದು ಸ್ಮಶಾನ. ಆದರೆ ಅವು ಗಮನಾರ್ಹ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿರುವುದು ನೋಡಿ ಅಚ್ಚರಿಯಾಯಿತು. ತಾಪಮಾನ ವೈಪರೀತ್ಯವನ್ನು ತಗ್ಗಿಸುವುದು ನಮ್ಮ ಎದುರಿಗೆ ಇರುವ ಅತಿ ಮುಖ್ಯ ಮಾರ್ಗ. ಹವಳಗಳು ಮೃತಪಟ್ಟಿವೆ. ಇನ್ನೇನೂ ಮಾಡುವುದು ಉಳಿದಿಲ್ಲ ಎಂದು ಹೇಳುವ ಬದಲು ಈ ನಿಟ್ಟಿನಲ್ಲಿ ಮುಂದುವರಿಯಬೇಕಿದೆ’ ಎನ್ನುತ್ತಾರೆ ವಿಜ್ಞಾನಿ ಕಿಮ್ ಕಾಬ್.
2050ರವರೆಗೂ ಹವಳಗಳು ಅಸ್ತಿತ್ವ ಉಳಿಸಿಕೊಳ್ಳುತ್ತವೆ. ಆದರೆ ಅವು ಹೀಗೆಯೇ ದಟ್ಟವಾಗಿ ಬೆಸೆದುಕೊಂಡಿರದೆ, ತುಣುಕುಗಳಾಗಿ ಹಂಚಿಹೋಗಲಿವೆ. ಹವಳ ಜೀವಿಗಳ ನಾಶಕ್ಕೆ ದೀರ್ಘಕಾಲದ ಪರಿಸರ ಬದಲಾವಣೆಗಳು ಕಾರಣವಾಗಿದ್ದರೂ, ಈ ದಿಬ್ಬಗಳು 1985ರ ಬಳಿಕವೇ ತನ್ನ ಅರ್ಧದಷ್ಟು ಹವಳದ ಮುಚ್ಚುಗೆಯನ್ನು ಕಳೆದುಕೊಂಡಿವೆ ಎಂದು ರಾಷ್ಟ್ರೀಯ ವಿಜ್ಞಾನಗಳ ಅಕಾಡೆಮಿ ವರದಿ ತಿಳಿಸಿದೆ. ಪ್ರವಾಸಿಗರನ್ನು ಕರೆದೊಯ್ಯಲು ಸಮುದ್ರ ಪ್ರವಾಸೋದ್ಯಮವು ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಿದೆ. ವೈವಿಧ್ಯಮಯ ದೋಣಿಗಳು, ಹಡಗುಗಳಲ್ಲಿ ಅಲ್ಪಾವಧಿ ಅಥವಾ ದೀರ್ಘಾವಧಿ ಪ್ರವಾಸಗಳನ್ನು ಆಯೋಜಿಸುತ್ತದೆ. ಹೆಲಿಕಾಪ್ಟರ್ ವೀಕ್ಷಣೆಗೂ ಅವಕಾಶವಿದೆ. ನೀರಿನೊಳಗೆ ಧುಮುಕಿ ಈಜಾಡುವ ಸೌಲಭ್ಯಗಳಿವೆ. ದಿಬ್ಬಗಳಿಗೆ ಹಾನಿಯಾಗಲು ಪ್ರವಾಸೋದ್ಯಮ ಚಟುವಟಿಕೆಗಳೂ ಕಾರಣ ಎಂಬ ಆರೋಪಗಳಿವೆ.
ಸಮುದ್ರದಲ್ಲಿನ ಬಂಡೆಗಳು, ಬೆಟ್ಟಗಳನ್ನು ಆಶ್ರಯಿಸುವ ಸೂಕ್ಷ್ಮಾಣು ಜೀವಿಗಳ ಮೊಟ್ಟೆಗಳಿಂದ ಮತ್ತು ಪಾಚಿಗಳು ಕವಲೊಡೆಯುವ ಮೂಲಕ ಹವಳಗಳು ಉತ್ಪತ್ತಿಯಾಗುತ್ತವೆ. ಈ ಹವಳದ ದಿಬ್ಬಗಳ ನಿರ್ಮಾಣಕ್ಕೆ ಸಾವಿರಾರು ವರ್ಷ ಬೇಕು. ಕೋಟಿಗಟ್ಟಲೆ ವರ್ಷಗಳ ಹಿಂದೆ ಬೆಟ್ಟಗುಡ್ಡಗಳು ಸ್ಥಿತ್ಯಂತರ ಹೊಂದುವಾಗ ಈ ಸಾಲು ದಿಬ್ಬಗಳು ಸೃಷ್ಟಿಯಾದವು. ಈಗಿರುವ ದಿಬ್ಬದ ರಚನೆಯು 20 ಸಾವಿರ ವರ್ಷದ ಹಿಂದೆ ರೂಪುಗೊಂಡಿರುವಂಥವು. ಆ ವೇಳೆ ಸಮುದ್ರ ನೀರಿನ ಮಟ್ಟ ಕೇವಲ 60 ಮೀಟರ್ ಇತ್ತು. ಹವಳಗಳು ಆಗ ಕರಾವಳಿಯುದ್ದಕ್ಕೂ ಇರುವ ಬೆಟ್ಟಗಳನ್ನು ಆವರಿಸಿಕೊಳ್ಳತೊಡಗಿದವು. ಸಮುದ್ರ ಮಟ್ಟ ಏರಿದಂತೆ ಹವಳದ ವ್ಯಾಪ್ತಿಯೂ ಹಿಗ್ಗತೊಡಗಿತು.
ಹವಳಗಳು ಕೆಂಪು, ಹಳದಿ, ಕಂದು, ಹಸಿರು ಮುಂತಾದ ಬಣ್ಣಗಳಲ್ಲಿ ಕಂಡುಬರುತ್ತವೆ. ಒಂದು ಹವಳ 3 ರಿಂದ 56 ಮಿಲಿ ಮೀಟರ್ ಬೆಳೆಯಬಲ್ಲದು. ಹವಳಗಳ ದಿಬ್ಬಗಳು 75 ರಿಂದ 1,500 ಮೀಟರ್ ಉದ್ದದವರೆಗೆ ಹರಡುತ್ತವೆ. ಪರಿಸರದ ಮೇಲಿನ ಒತ್ತಡ ಪರಿಣಾಮಗಳಿಂದ ಈ ಹವಳದ ದಂಡೆಗಳು ತಮ್ಮ ಮೆರುಗು ಕಳೆದುಕೊಳ್ಳತೊಡಗುತ್ತವೆ. ಮುಖ್ಯವಾಗಿ, ತಾಪಮಾನ ಬದಲಾವಣೆಯಿಂದ ಸಮುದ್ರದ ನೀರು ಬಿಸಿಯಾದಂತೆ ಹವಳಗಳು ತಮ್ಮ ಸುತ್ತಲಿನ ಪಾಚಿಗಳನ್ನು ಹೊರಹಾಕುತ್ತವೆ. ಪಾಚಿಗಳಿಲ್ಲದೆ ಅವು ಉಳಿದುಕೊಳ್ಳಲು ಸಾಧ್ಯವಿಲ್ಲ. ಈಗ ನಡೆಯುತ್ತಿರುವುದು ಇದೇ ಅಪಾಯಕಾರಿ ಪ್ರಕ್ರಿಯೆ. ಕಡಲ ನೀರು ಬಿಸಿಯಾಗುತ್ತಿರುವುದರಿಂದ ಹವಳಗಳು ತಮ್ಮ ರಕ್ಷಣೆಗೆ ಇರುವ ಪಾಚಿಗಳನ್ನು ಕಳೆದುಕೊಳ್ಳುತ್ತಿವೆ. ಕ್ರಮೇಣ ಹೊಳಪು ಕಳೆದುಕೊಂಡು ಬಿಳಿಬಣ್ಣಕ್ಕೆ ತಿರುಗುತ್ತಿವೆ.
ಬೃಹತ್ ಜೀವ ವೈವಿಧ್ಯಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಹವಳದ ದಿಬ್ಬದ ಸಾಲನ್ನು ವಿಶ್ವಸಂಸ್ಥೆ 1981ರಲ್ಲಿ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿದೆ. ಈ ಅಪೂರ್ವ ದಿಬ್ಬಗಳನ್ನು ಮತ್ತು ಜೀವಸಂಕುಲವನ್ನು ಉಳಿಸಿಕೊಳ್ಳಲು ಜಗತ್ತಿನ ಹವಳ ಪರಿಣತರು ಸೇರಿ ಸಮಾಲೋಚನೆ ನಡೆಸುತ್ತಿದ್ದಾರೆ. ಮಲೇಷ್ಯಾ, ಆಂಟಿಗುವಾ, ಹಂಡುರಸ್, ಪಪುವಾ ನ್ಯೂಗಿನಿ ದೇಶಗಳಲ್ಲಿಯೂ ಈ ಸಮಸ್ಯೆ ಕಾಡುತ್ತಿದೆ. ಹವಾಮಾನ ಏರಿಕೆಯನ್ನು ತಡೆಯುವುದರ ಜತೆಗೆ, ಪರ್ಯಾಯ ಮಾರ್ಗಗಳನ್ನು ಹುಡುಕುವ ಮತ್ತು ಮಾಹಿತಿ ವಿನಿಮಯದ ಪ್ರಯತ್ನಗಳು ನಡೆಯುತ್ತಿವೆ. ಹವಳದ ದಂಡೆಗಳಿರುವ ಭಾಗಗಳಿಗೆ ಶುದ್ಧ ನೀರು ಹರಿಸುವ ಯೋಜನೆ ಕಾರ್ಯರೂಪದಲ್ಲಿದೆ.
ಜಗತ್ತಿನ ಅತಿ ದೊಡ್ಡ ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿದ್ದ ಆಸ್ಟ್ರೇಲಿಯಾದ ಹವಳದ ದಿಬ್ಬಗಳು ಬಹುತೇಕ ‘ಮರಣ ಹೊಂದಿವೆ’ ಎಂದು ವಿಜ್ಞಾನಿಗಳು ಘೋಷಿಸಿದ್ದಾರೆ. ಹವಾಮಾನ ವೈಪರೀತ್ಯ ನೈಸರ್ಗಿಕ ಅದ್ಭುತವೊಂದರ ವಿನಾಶಕ್ಕೆ ಕಾರಣವಾಗುತ್ತಿದೆ.