(Translated by https://www.hiragana.jp/)
ಹಳೆ ಒಡಂಬಡಿಕೆ - ವಿಕಿಪೀಡಿಯ ವಿಷಯಕ್ಕೆ ಹೋಗು

ಹಳೆ ಒಡಂಬಡಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಳೆ ಒಡಂಬಡಿಕೆಯು (Old Testament) ಬೈಬಲ್ ನ ಪ್ರಥಮ ಭಾಗವಾಗಿದೆ. ಸುಮಾರು ೨೦೦೦ ವರ್ಷಗಳ ಐತಿಹ್ಯವಿರುವ ಬೈಬಲ್‌ನ ಮೂಲ ರೂಪ ಹೀಬ್ರುಗಳ ಪವಿತ್ರ ಗ್ರಂಥವಾದ ತನಕ್. ೫೦೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ಇದು ಬೈಬಲ್‌ನ ಒಂದು ಭಾಗವಾಗಿ ಉಳಿದುಕೊಂಡಿದೆ. ಯೇಸು ಕ್ರಿಸ್ತನು ಮತ್ತು ಆತನ ಶಿಷ್ಯರು ತಮ್ಮ ಭೋದನೆಗಳಲ್ಲಿ ಹಳೆ ಒಡಂಬಡಿಕೆಯ ಅನೇಕ ಭಾಗಗಳನ್ನು ಆಧಾರ ಮಾಡಿಕೊಂಡು ಭೋದಿಸುತ್ತಿದ್ದರು.ಹಳೆ ಒಡಂಬಡಿಕೆಯ ಈ ಭಾಗಗಳನ್ನು ಮೋಸೆಸ್‌ನ ಧರ್ಮಶಾಸ್ತ್ರ, ಪ್ರವಾದನ ಗ್ರಂಥ, ಕೀರ್ತನೆಗಳು ಎಂದು ವಿಂಗಡಿಸಲಾಗಿದೆ.

ಕ್ರಿಸ್ತವೇದವಾದ ಬೈಬಲಿನ ಮುಖ್ಯ ಭಾಗಗಳು (ಟೆಸ್ಟಮೆಂಟ್ಸ್-ಓಲ್ಡ್ ಅಂಡ್ ನ್ಯೂ). ಮೊದಲನೆಯದು ಹಳೆಯ ಒಡಂಬಡಿಕೆ, ಎರಡನೆಯದು ಹೊಸ ಒಡಂಬಡಿಕೆ. ಇವು ಕಾಲದಿಂದ ಕಾಲಕ್ಕೆ ದೇವರು ಅಪ್ಪಣೆ ಕೊಟ್ಟ ವಿಧಾಯಕ ವಾಕ್ಯ ರೂಪದಲ್ಲಿವೆ. ಕ್ರೈಸ್ತ ಮತದ ತಾರುಣ್ಯದಲ್ಲಿ ಹೊಸ ಒಡಂಬಡಿಕೆಗೆ ಮಾತ್ರ ಪವಿತ್ರವಾದುದೆಂಬ ಭಾವನೆ ಇತ್ತು. ಹಳೆಯ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆ ಎರಡೂ ಪವಿತ್ರವಾದುವೇ ಎಂಬುದು ಈಗ ಕ್ರೈಸ್ತರಿಗೆ ಸಾಮಾನ್ಯವಾಗಿ ಒಪ್ಪಿಗೆಯಾಗಿರುವ ಅಭಿಪ್ರಾಯ. ಈ ಎರಡರಲ್ಲೂ ಪ್ರಕಟವಾಗಿರುವ ವಿಧಾಯಕ ವಾಕ್ಯಗಳು ಒಂದೇ ದೇವರ ವಾಕ್ಯಗಳು. ಆದರೂ ಈ ವಿಧಾಯಕ ವಾಕ್ಯಗಳಿಗೆ ಕೊಟ್ಟಿರುವ ಸ್ಥಾನಮಾನಗಳಲ್ಲಿ ವ್ಯತ್ಯಾಸವಿದೆ. ಹಳೆಯ ಒಡಂಬಡಿಕೆಯಲ್ಲಿರುವವು ಆಖೈರು ವಾಕ್ಯಗಳಲ್ಲ. ಹೊಸ ಒಡಂಬಡಿಕೆಯವು ಪೂರ್ಣವಾದುವು, ಅಂತಿಮವಾದುವು. ಮುಂದೆ ಉದ್ಧಾರಕನ ಅವತಾರವಾಗುವುದೆಂಬ ಭರವಸೆಯ ಮಾತುಗಳು ಹಳೆಯ ಒಡಂಬಡಿಕೆಯ ಉದ್ದಕ್ಕೂ ಬಂದಿವೆ. ಆ ಉದ್ಧಾರಕನೇ ಯೇಸು ಕ್ರಿಸ್ತ. ಅವನದು ಹಳೆಯ ಒಡಂಬಡಿಕೆಯ ಪ್ರವಾದಿಗಳ ದರ್ಜೆಗಿಂತ ಮೇಲಿನದು. ಪ್ರವಾದಿಗಳು ದೇವಪುತ್ರರಲ್ಲ. ಯೇಸುವಾದರೋ ಸಾಕ್ಷಾತ್ ದೇವಪುತ್ರ, ದೇವರೇ ಸಾಕ್ಷಾತ್ತಾಗಿ ಕ್ರೈಸ್ತನ ರೂಪದಲ್ಲಿ ಬಂದು ಜನತೆ ದೇವರಾಜ್ಯವನ್ನು ಸೇರುವ ಮಾರ್ಗವನ್ನು ತೋರಿಸಿರುತ್ತಾನೆ. ಯೇಸು ಕ್ರಿಸ್ತನ ಮುಖದಿಂದ ಹೊರಬಿದ್ದ ವಿಧಾಯಕ ವಾಕ್ಯಗಳು ಅಂತಿಮ ಸಂದೇಶದ ವಾಕ್ಯಗಳು. ಇವು ಹೊಸ ಒಡಂಬಡಿಕೆಯಲ್ಲಿವೆ.

ಮೊಟ್ಟ ಮೊದಲಿಗೆ ಒಪ್ಪಂದದ ಮಾತು ಕಾಣಿಸಿಕೊಳ್ಳುವುದು ಹಳೆಯ ಒಡಂಬಡಿಕೆಯ ಮೊದಲ ಭಾಗವಾದ ಜೆನಿಸಿಸ್ಸಿನಲ್ಲಿ. ಅಲ್ಲಿ ದೇವರು ನೋವಾ ಮತ್ತು ಅವನ ಮಕ್ಕಳಿಗೆ ಹೇಳಿದ ವಾಕ್ಯಗಳು ಇವು; ಇಗೋ, ನಾನು ನನ್ನ ಮತ್ತು ನಿನ್ನ ಮಕ್ಕಳೊಡನೆ ಮತ್ತು ನಿನ್ನ ಸಂತತಿಯೊಡನೆ, ನಿನ್ನ ಜೊತೆಯಲ್ಲಿರುವ ಎಲ್ಲ ಪ್ರಾಣಿಗಳು ಅಂದರೆ ಪಕ್ಷಿಗಳು, ದನಗಳು ಮತ್ತು ಭೂಮಿಯ ಮೇಲಿನ ಎಲ್ಲ ಪ್ರಾಣಿಗಳು ಈ ಎಲ್ಲರೊಡನೆ ನನ್ನ ಒಪ್ಪಂದವನ್ನು ಸ್ಥಾಪಿಸುತ್ತೇನೆ. ನನಗೂ ಮತ್ತು ಈ ಭೂಮಿಯ ಮೇಲಿರುವ ಎಲ್ಲದಕ್ಕೂ ಆದ ಈ ಒಪ್ಪಂದದ ಕುರುಹಾಗಿ ನಾನು ಮೋಡದಲ್ಲಿ ನನ್ನ ಬಿಲ್ಲನ್ನು ನೆಟ್ಟಿರುತ್ತೇನೆ.

ದೇವರು ಏಬ್ರಹಾಮನೊಡನೆ ಮಾಡಿಕೊಂಡ ಒಪ್ಪಂದ ಎರಡನೆಯದು. ಇದು ಜೆನಿಸಿಸ್ಸಿನ ಹದಿನೇಳನೆಯ ಅಧ್ಯಾಯದಲ್ಲಿ ಉಲ್ಲೇಖಿತವಾಗಿದೆ. ಏಬ್ರಮ್‍ಗೆ ತೊಂಬತ್ತೊಂಬತ್ತು ವಯಸ್ಸಾದಾಗ ಅವನಿಗೆ ದೇವರು ಕಾಣಿಸಿಕೊಂಡ. ದೇವರ ಮುಂದೆ ಅಡ್ಡಬಿದ್ದಾಗ ದೇವರು ತನ್ನ ಒಪ್ಪಂದವನ್ನು ಅವನಿಗೆ ಹೇಳಿದ: ನೀನು ಅನೇಕ ಜನಾಂಗಗಳ ತಂದೆಯಾಗುವೆ. ಇನ್ನೂ ಮುಂದೆ ನಿನ್ನ ಹೆಸರು ಏಬ್ರಹಾಮ್-ಏಬ್ರಮ್ ಅಲ್ಲ. ಕ್ಯಾನನ್ ಪ್ರದೇಶವನ್ನು ನಿನ್ನ ಮತ್ತು ನಿನ್ನ ಪೀಳಿಗೆಯವರು ಸರ್ವಕಾಲಕ್ಕೂ ಅನುಭವಿಸುವಂತೆ ಒಪ್ಪಿಸಿರುತ್ತೇನೆ. ಈ ಒಡಂಬಡಿಕೆಯ ಗುರುತಾಗಿ ಹುಟ್ಟಿದ ಮಕ್ಕಳಿಗೆಲ್ಲರಿಗೂ ನೀನು ಹಣ ಕೊಟ್ಟು ಕೊಂಡವರಿಗೂ ನೀನು ಪರಿವರ್ತನವೇರ್ಪಡಿಸಬೇಕು. ಎಕ್ಸೋಡಸ್ಸಿನ ಹತ್ತೊಂಬತ್ತರಿಂದ ಇಪ್ಪತ್ತನಾಲ್ಕನೆಯ ಅಧ್ಯಾಯದವರೆಗಿನವುಗಳಲ್ಲಿ ಹೇಳಿರುವಂತೆ ಪ್ರಭು ಮೋಸೆಯೊಡನೆ ಮಾಡಿಕೊಂಡ ಒಪ್ಪಂದ ಮೂರನೆಯದು. ಇದರ ಇಪ್ಪತ್ತನೆಯ ಅಧ್ಯಾಯದಲ್ಲಿ ಪ್ರಭುವಿನ ಹತ್ತು ಆಜ್ಞೆಗಳು ವರ್ಣಿತವಾಗಿವೆ. ಈ ಒಪ್ಪಂದ ಹಿಂದಿನ ಒಪ್ಪಂದಗಳಿಗಿಂತ ಹೆಚ್ಚು ವಿಸ್ತಾರವಾಗಿದೆ.

ಜೆರೀಮಿಯಾದ ಮೂವತ್ತೊಂದರಿಂದ ಮೂವತ್ತನಾಲ್ಕನೆಯ ಅಧ್ಯಾಯಗಳಲ್ಲಿ ಹಳೆಯ ಒಡಂಬಡಿಕೆಗೆ ಹೊಸ ವಿವರಣೆಯನ್ನು ಕೊಟ್ಟು ಅದನ್ನು ಮುಂದೆ ಬರಲಿರುವ ಹೊಸ ಒಡಂಬಡಿಕೆ ಎಂದು ಕರೆದಿದೆ. ಈ ಹೊಸ ಒಡಂಬಡಿಕೆಯನ್ನು ಇಸ್ರೇಲ್ ಮನೆತನದವರೊಡನೆ ಮುಂದಿನ ಕಾಲದಲ್ಲಿ ಏರ್ಪಡಿಸುವುದಾಗಿಯೂ ಆಗ ತನ್ನ ನಿಯಮವನ್ನು ಅವರ ಹೃದಯದೊಳಗೆ ಬರೆಯುವುದಾಗಿಯೂ ಪ್ರಭು ಹೇಳಿರುತ್ತಾನೆ.

ಹಳೆ ಒಡಂಬಡಿಕೆಯಲ್ಲಿ ೩೯(ಪ್ರೊಟೆಸ್ಟಂಟರ ಆವೃತಿ)+೧೩(ಕಥೋಲಿಕರ ಆವೃತಿ) ಪುಸ್ತಕಗಳಿವೆ. ಅವು ಈ ಕೆಳಕಂಡಂತೆ ಇವೆ.

  1. ಆದಿಕಾಂಡ
  2. ವಿಮೋಚನಾಕಾಂಡ
  3. ಯಾಜಕಕಾಂಡ
  4. ಸಂಖ್ಯಾಕಾಂಡ
  5. ಧರ್ಮೋಪದೇಷಕಾಂಡ
  6. ಯೊಹೋಶುವ
  7. ನ್ಯಾಯಸ್ಥಾಪಕರು
  8. ರೂತಳು
  9. ಸಮುವೇಲನು ಭಾಗ ೧
  10. ಸಮುವೇಲನು ಭಾಗ ೨
  11. ಅರಸುಗಳು ಭಾಗ ೧
  12. ಅರಸುಗಳು ಭಾಗ ೨
  13. ಪೂರ್ವಕಾಲದ ವೃತ್ತಾಂತ ಭಾಗ ೧
  14. ಪೂರ್ವಕಾಲದ ವೃತ್ತಾಂತ ಭಾಗ ೨
  15. ಎಜ್ರನು
  16. ನೆಹೆಮೀಯಾ
  17. ಎಸ್ತೆರಳು
  18. ಯೋಬನ ಗ್ರಂಥ
  19. ಕೀರ್ತನೆಗಳು
  20. ಜ್ಞಾನೋಕ್ತಿಗಳು
  21. ಉಪದೇಷಕ
  22. ಪರಮಗೀತೆ
  23. ಪ್ರವಾದಿ ಯೆಶಾಯನ ಗ್ರಂಥ
  24. ಪ್ರವಾದಿ ಯೆರೆಮೀಯನ ಗ್ರಂಥ
  25. ಪ್ರಲಾಪಗಳು
  26. ಪ್ರವಾದಿ ಯೆಜೆಕಿಯೇಲನ ಗ್ರಂಥ
  27. ಪ್ರವಾದಿ ದಾನಿಯೇಲನ ಗ್ರಂಥ
  28. ಪ್ರವಾದಿ ಹೊಶೇಯನ ಗ್ರಂಥ
  29. ಪ್ರವಾದಿ ಯೊವೇಲನ ಗ್ರಂಥ
  30. ಪ್ರವಾದಿ ಆಮೋಸನ ಗ್ರಂಥ
  31. ಪ್ರವಾದಿ ಓಬದ್ಯನ ಗ್ರಂಥ
  32. ಪ್ರವಾದಿ ಯೋನನ ಗ್ರಂಥ
  33. ಪ್ರವಾದಿ ಮೀಕನ ಗ್ರಂಥ
  34. ಪ್ರವಾದಿ ನಹೂಮನ ಗ್ರಂಥ
  35. ಪ್ರವಾದಿ ಹಬಕ್ಕೂಕನ ಗ್ರಂಥ
  36. ಪ್ರವಾದಿ ಜೆಫನ್ಯನ ಗ್ರಂಥ
  37. ಪ್ರವಾದಿ ಹಗ್ಗಾಯನ ಗ್ರಂಥ
  38. ಪ್ರವಾದಿ ಜೆಕರ್ಯನ ಗ್ರಂಥ
  39. ಪ್ರವಾದಿ ಮಲಾಕಿಯನ ಗ್ರಂಥ
    • ಅನುಗ್ರಂಥಗಳು(ಪ್ರೊಟೆಸ್ಟಂಟರ ಬೈಬಲ್‌ನಲ್ಲಿ ಈ ಕೆಳಕಂಡ ೧೩ ಪುಸ್ತಕಗಳು ಇರುವುದಿಲ್ಲ)
  1. ತೊಬೀತನ ಗ್ರಂಥ ೧
  2. ತೊಬೀತನ ಗ್ರಂಥ ೨
  3. ಜೂಡಿತಳು
  4. ಎಸ್ತೇರಳು
  5. ಸೊಲೊಮೋನನ ಜ್ಞಾನಗ್ರಂಥ
  6. ಸಿರಾಖನು
  7. ಬಾರೂಕನು
  8. ಪ್ರವಾದಿ ಯೆರೆಮೀಯನ ಪತ್ರ
  9. ಅಜರ್ಯನ ಗೀತೆ ಹಾಗು ಮೂವರು ಯುವಕರ ಕೀರ್ತನೆ
  10. ಸುಸನ್ನಳ ಗ್ರಂಥ
  11. ಬೇಲ್ ದೇವತೆ ಮತ್ತು ಘಟಸರ್ಪ
  12. ಮಕ್ಕಾಬಿಯರ ಗ್ರಂಥ೧
  13. ಮಕ್ಕಾಬಿಯರ ಗ್ರಂಥ೨