(Translated by https://www.hiragana.jp/)
ಭಿನ್ನಮತವಿದ್ದರೂ, ಸರ್ಕಾರ ಬೀಳದು: ಸತೀಶ ಜಾರಕಿಹೊಳಿ
ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನಮತವಿದ್ದರೂ, ಸರ್ಕಾರ ಬೀಳದು: ಸತೀಶ ಜಾರಕಿಹೊಳಿ

Published 13 ಮೇ 2024, 15:00 IST
Last Updated 13 ಮೇ 2024, 15:00 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಕಾಂಗ್ರೆಸ್‌ ಸರ್ಕಾರದಲ್ಲಿ ಭಿನ್ನಮತವಿದೆ. ಆದರೆ, ಅದು ಸರ್ಕಾರ ಪತನಕ್ಕೆ ಕಾರಣವಾಗುವುದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ’ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿಕೆ ಕುರಿತು ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ನಮ್ಮದು ಪಕ್ಷದ ಒಳಗಿನ ಘರ್ಷಣೆ. ಪಕ್ಷದ ಹೊರಗೆ ಯಾವುದೇ ಘರ್ಷಣೆ ಇಲ್ಲ. ಹೀಗಾಗಿ ಭಿನ್ನಮತದಿಂದ ನಮ್ಮ ಸರ್ಕಾರ ಬೀಳುತ್ತದೆ ಎನ್ನುವುದು ಸುಳ್ಳು’ ಎಂದರು.

‘ಅಭಿವೃದ್ಧಿ, ಅನುದಾನ, ವರ್ಗಾವಣೆ ವಿಚಾರಗಳಲ್ಲಿ ನಮ್ಮ ಸರ್ಕಾರದಲ್ಲಿ ಭಿನ್ನಮತ ಇರಬಹುದು. ಅಧಿಕಾರ ಇರುವವರೆಗೂ ಸಮಸ್ಯೆಗಳು ಇರುತ್ತವೆ. ಅವುಗಳನ್ನು ನಾವು ಸರಿಪಡಿಸಿಕೊಳ್ಳುತ್ತೇವೆ. ಗೊಂದಲ, ಭಿನ್ನಮತ ಬರುತ್ತವೆ, ಹೋಗುತ್ತವೆ. ಅವುಗಳ ಕಾರಣಕ್ಕೆ ಸರ್ಕಾರ ಪತನವಾಗುತ್ತದೆ ಎನ್ನುವುದರಲ್ಲಿ ಸತ್ಯವಿಲ್ಲ’ ಎಂದು ಹೇಳಿದರು.

ಮಹಾರಾಷ್ಟ್ರದ ಸ್ಥಿತಿಯನ್ನು ಕರ್ನಾಟಕಕ್ಕೆ ಹೋಲಿಸಲು ಆಗುವುದಿಲ್ಲ. ಕರ್ನಾಟಕದಲ್ಲಿ ಈ ಸರ್ಕಾರ ಪತನಗೊಳಿಸಬೇಕಾದರೆ ದೊಡ್ಡ ಅಂತರವನ್ನು ದಾಟಬೇಕಿದೆ. ಮಹಾರಾಷ್ಟ್ರದಲ್ಲಿ ಹಾಗೆ ಇರಲಿಲ್ಲ. ಆರು ಮೀಟರ್‌ ಉದ್ದ ಜಿಗಿಯಬೇಕಾದ ಸಂದರ್ಭದಲ್ಲಿ ಅವರು ಎಂಟು ಮೀಟರ್‌ ಜಿಗಿದರು. ಕರ್ನಾಟಕದಲ್ಲಿ 15 ಮೀಟರ್‌ ಜಿಗಿಯಬೇಕಿದೆ. ಅದು ಸಾಧ್ಯವಾಗುತ್ತಾ ಎಂದು ಪ್ರಶ್ನಿಸಿದರು.

ಏಕನಾಥ ಶಿಂಧೆ ಅವರು ಸ್ವತಂತ್ರರಿದ್ದಾರೆ. ಅವರು ತಮ್ಮ ಪಕ್ಷದ ನಾಯಕರ ಜತೆ ಚರ್ಚಿಸಿರಬಹುದು. ಆದರೆ, ಕಾಂಗ್ರೆಸ್‌ ನಾಯಕರ ಜತೆ ಚರ್ಚಿಸಲು ಸಾಧ್ಯವೆ ಎಂದು ಕೇಳಿದರು.

ರಾಜೀನಾಮೆ ಪ್ರಶ್ನೆ ಉದ್ಭವಿಸದು: ‘ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನ ಗೆದ್ದ ಕಾರಣಕ್ಕೆ ಮುಖ್ಯಮಂತ್ರಿ ಅಥವಾ ಸರ್ಕಾರದಲ್ಲಿರುವವರು ರಾಜೀನಾಮೆ ನೀಡಬೇಕಾದ ಪ್ರಶ್ನೆ ಉದ್ಭವಿಸದು. ಹಿಂದೆ ಯಾವತ್ತೂ ಆ ರೀತಿ ಆಗಿಲ್ಲ. ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಯಾವ ಪಕ್ಷ ಅಧಿಕಾರದಲ್ಲಿದ್ದಾಗಲೂ ರಾಜೀನಾಮೆ ನೀಡಿದ ಉದಾಹರಣೆ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂಪುಟ ಪುನಾರಚನೆ ಕುರಿತು ಕೇಳಿದಾಗ, ‘ಆ ಬಗ್ಗೆ ಮುಖ್ಯಮಂತ್ರಿಯವರನ್ನು ಕೇಳಬೇಕು. ಚುನಾವಣೆಯಲ್ಲಿ ಸಚಿವರಿಗೆ ಯಾವುದೇ ಗುರಿ ನೀಡಿರಲಿಲ್ಲ. ಗೆಲ್ಲಿಸಿಕೊಂಡು ಬರಲೇಬೇಕೆಂಬ ಷರತ್ತು ಹಾಕಿರಲಿಲ್ಲ’ ಎಂದರು.

‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು 14 ಸ್ಥಾನ ಗೆಲ್ಲಲಿ, ನಾವು 14 ಸ್ಥಾನ ಗೆಲ್ಲುತ್ತೇವೆ. ಜನರು ಹಾಗೆ ತೀರ್ಮಾನಿಸಿದ್ದಾರೆ. ಸಮಬಲ ಇದ್ದರೆ ಯಾರು? ಯಾರ ಮೇಲೂ ಆರೋಪ ಮಾಡಲಾಗುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT