(Translated by https://www.hiragana.jp/)
Paris Olympics | ಪ್ಯಾರಿಸ್‌ನಲ್ಲಿ ಮನು ಕನಸು ನನಸು
ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics | ಪ್ಯಾರಿಸ್‌ನಲ್ಲಿ ಮನು ಕನಸು ನನಸು

ಹರಿಯಾಣ ಹುಡುಗಿಯ ಪ್ರಶಸ್ತಿ ಸಂಗ್ರಹಕ್ಕೆ ಒಲಿಂಪಿಕ್ಸ್ ಪದಕ ಮೆರಗು
ಸಿಡ್ನಿ ಕಿರಣ್
Published : 29 ಜುಲೈ 2024, 0:30 IST
Last Updated : 29 ಜುಲೈ 2024, 0:30 IST
ಫಾಲೋ ಮಾಡಿ
Comments

ಪ್ಯಾರಿಸ್: ಮನು ಭಾಕರ್ ಬಾಲ್ಯದಿಂದಲೂ ಅಸಾಧಾರಣ ಪ್ರತಿಭೆಯ ಹುಡುಗಿ.  ಬಾಕ್ಸಿಂಗ್, ಟೆನಿಸ್, ಸ್ಕೇಟಿಂಗ್ ಮತ್ತು ಮಣಿಪುರದ ಸಮರ ಕಲೆಯಾದ  ಹಯೆನ್ ಲ್ಯಾಂಗ್ಲಾನ್ ಕ್ರೀಡೆಗಳಲ್ಲಿ ತಕ್ಕಮಟ್ಟಿಗೆ ಸಾಧನೆ ತೋರಿದ್ದರು. ಆದರೆ ದಶಕದ ಹಿಂದೆ ಶೂಟಿಂಗ್‌ ಕ್ರೀಡೆಗೆ ಕಾಲಿಟ್ಟ ಮೇಲೆ ಹಲವು ಅಂತರರರಾಷ್ಟ್ರೀಯ ದಾಖಲೆಗಳ ‘ಗುರಿ’ ಸಾಧನೆ ಮಾಡಿದರು.  

2018ರಲ್ಲಿ ಮೆಕ್ಸಿಕೊನಲ್ಲಿ ನಡೆದಿದ್ದ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ,  ಹರಿಯಾಣದ ಝಾಜರ್ ಜಿಲ್ಲೆಯ ಈ ಹುಡುಗಿ ಕ್ರೀಡಾಪ್ರಿಯರ ಚಿತ್ತವನ್ನು ತಮ್ಮತ್ತ ಸೆಳೆದಿದ್ದರು. ಭವಿಷ್ಯದ ತಾರೆಯಾಗುವ ಭರವಸೆ ಮೂಡಿಸಿದ್ದರು.  ಅವರು ನಿರೀಕ್ಷೆಗಳನ್ನು ಹುಸಿ ಮಾಡಲಿಲ್ಲ. ವಿಶ್ವಕಪ್, ವಿಶ್ವ ಚಾಂಪಿಯನ್‌ಷಿಪ್, ಕಾಮನ್‌ವೇಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದರು.

ಅವರ ಪ್ರಶಸ್ತಿಗಳ ಸಂಗ್ರಹದಲ್ಲಿ ಎಲ್ಲವೂ ಇದ್ದವು. ಆದರೆ, ಒಲಿಂಪಿಕ್ ಕೂಟದ ಪದಕವೊಂದರ ಕೊರತೆ ಇತ್ತು. ಅದು ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿಯೇ ಕೈಗೂಡಬೇಕಿತ್ತು. ಆದರೆ ಆ ಕೂಟದಲ್ಲಿ 10 ಮೀ ಏರ್‌ ಪಿಸ್ತೂಲ್ ಮತ್ತು 25 ಮೀ ಪಿಸ್ತೂಲ್ ವಿಭಾಗಗಳ ಅರ್ಹತಾ ಸುತ್ತಿನಲ್ಲಿಯೇ ವೈಫಲ್ಯ ಅನುಭವಿಸಿದ್ದರು. ಆಗ ಅವರ ಮನೋದಾರ್ಢ್ಯವನ್ನು ಹಲವರು ಪ್ರಶ್ನಿಸಿದ್ದರು. ಅಂದು ನಿರಾಶೆಯ ಕಣ್ಣೀರಿನೊಂದಿಗೆ ಕ್ರೀಡಾಗ್ರಾಮದಿಂದ ಹೊರಬಿದ್ದಿದ್ದರು. ಅಂದು ಟೀಕೆಗಳನ್ನು ಎದುರಿಸಿದ ರೀತಿಯು ವಯಸ್ಸಿಗೂ ಮೀರಿದ ಪ್ರಬುದ್ಧತೆಯನ್ನು ತೋರಿತ್ತು. ಒತ್ತಡ ಮತ್ತು ಅಪಾರ ನಿರೀಕ್ಷೆಗಳನ್ನು ನಿಭಾಯಿಸುತ್ತಲೇ ಬೆಳೆದರು. ಅದರ ಫಲವಾಗಿ ಪ್ಯಾರಿಸ್‌ನಲ್ಲಿ ಅವರ ಕಂಗಳಲ್ಲಿ ಆನಂದಭಾಷ್ಪ ಮಿನುಗಿದವು. ಈ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವ 22 ವರ್ಷದ ಮನು ಅವರ ಪರಮ ಗುರಿಯು ಈಡೇರಿತು. 

ಪ್ಯಾರಿಸ್‌ನಿಂದ 280 ಕಿ.ಮೀ ದೂರದಲ್ಲಿರುವ  ಭಾನುವಾರ ಮಧ್ಯಾಹ್ನ (ಫ್ರಾನ್ಸ್‌ ಕಾಲಮಾನ) ಶತೋಹು ಶೂಟಿಂಗ್ ರೇಂಜ್‌ನಲ್ಲಿ ಮನು ಕನಸು ಕೈಗೂಡಿತು. ಅವರ ಪ್ರಶಸ್ತಿಗಳ ಸಂಗ್ರಹಾಗಾರಕ್ಕೆ ಒಲಿಂಪಿಕ್ಸ್‌ನ ಕಂಚಿನ ಪದಕ ಸೇರಿತು. ಮಹಿಳೆಯರ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದಲ್ಲಿ ಪದಕ ಗೆಲ್ಲುವ ಮೂಲಕ ಇತಿಹಾಸ ರಚಿಸಿದರು. ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆಯಾದರು. ಫೈನಲ್‌ ಸುತ್ತಿನಲ್ಲಿ ಶ್ರೇಷ್ಠ ದರ್ಜೆಯ ಸ್ಪರ್ಧೆ ಏರ್ಪಟ್ಟಿತ್ತು. 

ದಕ್ಷಿಣ ಕೊರಿಯಾದ ಯೆ ಜಿನ್ ಓ (243.2 ಸ್ಕೋರ್) ಚಿನ್ನದ ಪದಕ ಜಯಿಸಿದರು. ಅವರದ್ದೇ ದೇಶದ ಯೇಜಿ ಕಿಮ್ (241.3) ಅಲ್ಪ ಅಂತರದಲ್ಲಿ ಮೊದಲ ಸ್ಥಾನ ತಪ್ಪಿಸಿಕೊಂಡು, ಬೆಳ್ಳಿ ಗಳಿಸಿದರು. ಮನು ಅವರು 221.7 ಸ್ಕೋರ್ ಮಾಡಿದರು. ಪದಕ ಸುತ್ತಿನ ಪೈಪೋಟಿಯಲ್ಲಿ ಮನು ಅವರು ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪಣಕ್ಕಿಟ್ಟರು. ಕೆಲವು ಹಂತಗಳಲ್ಲಿ ಕೋರಿಯಾದ ಇಬ್ಬರೂ ಶೂಟರ್‌ಗಳಿಗೆ ಪೈಪೋಟಿಯೊಡ್ಡಿದರು. 

‘ನಾನು ಒಲಿಂಪಿಕ್ ವಿಜಯ ವೇದಿಕೆಯ ಮೇಲೆ ನಿಲ್ಲುವ ಕನಸು ಕಂಡಿದ್ದೆ. ಅದು ನಿಜವಾಗಿರುವುದನ್ನು ನಂಬಲಾಗುತ್ತಿಲ್ಲ. ಸಂತಸದ ಉತ್ತುಂಗದಲ್ಲಿ ವಿಹರಿಸುತ್ತಿರುವಂತೆ ಭಾಸವಾಗುತ್ತಿದೆ. ಸ್ಪರ್ಧೆಯು ಅತ್ಯಂತ ತುರುಸಿನ ಪೈಪೋಟಿಯಿಂದ ಕೂಡಿತ್ತು. 0.1 ಅಂತರದಿಂದ ಇನ್ನಷ್ಟು ಉನ್ನತ ಸಾಧನೆ ಮಾಡುವ ಅವಕಾಶವನ್ನು ಕೈತಪ್ಪಿಸಿಕೊಂಡೆ.  ಈ ಪದಕ ಜಯದ ಸಾಧನೆಗೆ ಕಾರಣರಾದ ಎಲ್ಲರಿಗೂ ಮತ್ತು ಭಾರತಕ್ಕೆ ನಾನು ಆಭಾರಿಯಾಗಿರುವೆ’ ಎಂದು ಮನು ಪ್ರತಿಕ್ರಿಯಿಸಿದರು. 

25 ಮೀಟರ್ಸ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆ. 

ಭಗವದ್ಗೀತೆಯ ಸಾಲುಗಳೇ ಪ್ರೇರಣೆ

‘ನಾನು ಭಗವದ್ಗೀತೆಯನ್ನು ಬಹಳ ಇಷ್ಟಪಟ್ಟು ಓದುತ್ತೇನೆ. ಅದರಲ್ಲಿ ಶ್ರೀಕೃಷ್ಣ ಪರಮಾತ್ಮನು ಅರ್ಜುನ ಕರ್ಮದ ಮೇಲೆ ಗಮನವಿಡು. ಫಲದ ಚಿಂತೆ ಮಾಡಬೇಡ ಎಂದು ಹೇಳುವ ಮಾತು ಫೈನಲ್ ಸುತ್ತಿನಲ್ಲಿ ನನ್ನ ಮನದಲ್ಲಿ ಪ್ರತಿಧ್ವನಿಸುತ್ತಿತ್ತು. ಶನಿವಾರದ ಅರ್ಹತಾ ಸುತ್ತಿನ ಸಂದರ್ಭದಲ್ಲಿಯೂ ಇದೇ ಮಾತನ್ನು ನೆನಪಿಸಿಕೊಂಡೇ ಸ್ಪರ್ಧರಿಸಿದ್ದೆ. ಅದರಿಂದಾಗಿ ನನ್ನ ಗುರಿಯ ಮೇಲೆ ಏಕಾಗ್ರತೆ ಸಾಧಿಸಲು ಸಾಧ್ಯವಾಯಿತು. ಫಲಿತಾಂಶದ ಬಗ್ಗೆ ಚಿಂತಿಸುವುದನ್ನು ಬಿಟ್ಟು ಕಾರ್ಯದ ಮೇಲೆ ಏಕಾಗ್ರತೆ ಸಾಧಿಸಿದೆ’ ಎಂದು ಮನು ಹೇಳಿದರು. 

ಮೂರು ವರ್ಷಗಳ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆದ ನಿರಾಶೆಯ ನಂತರ ಅವರು ಆಧ್ಯಾತ್ಮದತ್ತ ಹೆಚ್ಚು ಒಲವು ಬೆಳೆಸಿಕೊಂಡರಂತೆ.

‘ಟೋಕಿಯೊ ಒಲಿಂಪಿಕ್ಸ್ ನಂತರ ನಾನು ಹೆಚ್ಚು ಧಾರ್ಮಿಕಳಾದೆ. ಆದರೆ ಕಟ್ಟಾ ಧಾರ್ಮಿಕವಾದಿಯಲ್ಲ. ಅಧ್ಯಾತ್ಮಕ್ಕೆ ನಮ್ಮನ್ನು ಉತ್ತಮ ಹಾದಿಯಲ್ಲಿ ನಡೆಸುವ ಅಪಾರವಾದ ಶಕ್ತಿ ಇದೆ. ನಮ್ಮನ್ನು ರಕ್ಷಿಸುವ ಚೈತನ್ಯವೂ ಇದೆ ಎಂಬುದರಲ್ಲಿ ಅಪಾರ ನಂಬಿಕೆ ಇದೆ. ನಮ್ಮೆಲ್ಲರನ್ನೂ ಸೃಷ್ಟಿಸಿದ ಮತ್ತು ಮುನ್ನಡೆಸುವ ಶಕ್ತಿಯೊಂದು ಇದೆ ಎಂಬುದರಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ’ ಎಂದು ಹೇಳಿದರು. 

ಭಾಕರ್ ಮನೆಯಲ್ಲಿ ಹೋಮ, ಹವನ

ಸೂರಜ್‌ಕುಂಡ, ಹರಿಯಾಣ(ಪಿಟಿಐ): ಮನು ಭಾಕರ್ ಅವರ ಮನೆಯಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ಹೋಮ, ಹವನ ನಡೆದವು. ಟಿ.ವಿ.  ಬಂದ್ ಆಗಿತ್ತು!

ಅತ್ತ ಪ್ಯಾರಿಸ್‌ನಲ್ಲಿ ಮನು ಭಾಕರ್ ಅವರು 10 ಮೀ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಕಂಚಿನ ಪದಕ ಜಯಿಸುವವರೆಗೂ ಹವನ ನಡೆಯುತ್ತಲೇ ಇತ್ತು. ಮನು ಕಂಚಿನ ಪದಕ ಜಯಿಸಿದ ನಂತರ ಮನೆಯಿಂದ ಹೊರಗೆ ಬಂದ ಅವರ ತಂದೆ ರಾಮಕಿಶನ್ ಭಾಕರ್ ಅವರು ತಮ್ಮ ಹಿತೈಷಿಗಳಿಂದ ಅಭಿನಂದನೆ ಸ್ವೀಕರಿಸಿದರು. 

‘ಮನು ಯಾವುದೇ ಅಂತರರಾಷ್ಟ್ರೀಯ ಸ್ಪರ್ಧೆಗೆ ಹೋದರೂ ನಾವು ಟಿ.ವಿ. ಬಂದ್ ಇಟ್ಟಿರುತ್ತೇವೆ. ಇದು ನಮ್ಮ ನಂಬಿಕೆ. ಬೆಳಿಗ್ಗೆಯಿಂದಲೇ ನನ್ನ ಪತ್ನಿ ಪೂಜೆ, ಹವನ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಮನು ಅವರ ಪರಿಶ್ರಮ, ಕೋಚ್ ಜಸ್ಪಾಲ್‌ ರಾಣಾ ಅವರ ಹಾರೈಕೆ ಮತ್ತು ಕ್ರೀಡಾ ಸಚಿವಾಲಯದ ನೆರವಿನಿಂದಾಗಿ ಈ ಸಾಧನೆ ಮೂಡಿಬಂದಿದೆ’ ಎಂದು ರಾಮಕಿಶನ್ ಅವರು ಪಿಟಿಐಗೆ ತಿಳಿಸಿದರು. 

‘ಇದು ಆರಂಭವಷ್ಟೇ. ಈ ಕೂಟದಲ್ಲಿ ಇನ್ನೂ ಎರಡು ವಿಭಾಗಗಳಲ್ಲಿ ಮನು ಸ್ಪರ್ಧಿಸಲಿದ್ದಾರೆ. ಅವರು ಇನ್ನೂ ಹೆಚ್ಚಿನ ಸಾಧನೆ ಮಾಡುವ ಭರವಸೆ ಇದೆ. ಪ್ಯಾರಿಸ್‌ನಿಂದ ಅವರು ದಿನವೂ ಕರೆ ಮಾಡಿ ಕೆಲ ನಿಮಿಷಗಳವರೆಗೆ ಮಾತನಾಡುತ್ತಾರೆ’ ಎಂದು ಹೇಳಿದರು. 

 ‘ಟೋಕಿಯೊ ಒಲಿಂಪಿಕ್ಸ್‌ನಲ್ಲಿಯೇ ಅವರು ಜಯಿಸುವ ವಿಶ್ವಾಸವಿತ್ತು. ಆದರೆ ಆ ಸ್ಪರ್ಧೆಯಲ್ಲಿ ಪಿಸ್ತೂಲ್ ಕೆಟ್ಟಿದ್ದು ಸಮಸ್ಯೆಯಾಯಿತು. ಅದು ತಾಂತ್ರಿಕ ಸಮಸ್ಯೆ. ಅದು ಮನು ಸಾಮರ್ಥ್ಯದ ಕೊರತೆಯಾಗಿರಲಿಲ್ಲ. ಆದ್ದರಿಂದಲೇ ಆಕೆ ವಿಶ್ವಾಸ ಕಳೆದುಕೊಳ್ಳದೇ ಸ್ಪರ್ಧಿಸಿದರು’ ಎಂದರು. 

ಪ್ರಧಾನಿ ಅಭಿನಂದನೆ: ‘ಮನು ಭಾಕರ್ ಅವರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪ್ರಥಮ ಪದಕ ಜಯಿಸಿದ ಅವರಿಗೆ ಅಭಿನಂದನೆಗಳು’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ವಿಜೃಂಭಿಸಿದ ನಾರಿಶಕ್ತಿ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾನುವಾರ ನಡೆದ ಸ್ಪರ್ಧೆಗಳಲ್ಲಿ ಭಾರತದ ಮಹಿಳಾ ಕ್ರೀಡಾಪಟುಗಳು
ವಿಜೃಂಭಿಸಿದರು.

ಪ್ರಸಕ್ತ ಕೂಟದಲ್ಲಿ ಮನು ಭಾಕರ್ ಅವರು ಪದಕದ ಖಾತೆ ತೆರೆದರು. ಮಹಿಳೆಯರ 10 ಮೀ ಏರ್ ರೈಫಲ್ ಶೂಟಿಂಗ್‌ನಲ್ಲಿ ಅವರು ಕಂಚು ಗೆದ್ದರು. ಇದರೊಂದಿಗೆ ಸತತ ಮೂರನೇ ಒಲಿಂಪಿಕ್ಸ್‌ನಲ್ಲಿಯೂ ಮಹಿಳೆಯರೇ ಮೊದಲ ಪದಕ ಜಯಿಸುವ ಪರಂಪರೆಯನ್ನು ಮುಂದುವರಿಸಿದರು.

2016ರಲ್ಲಿ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಮತ್ತು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಅವರು ಭಾರತಕ್ಕೆ ಪದಕ ಖಾತೆ ತೆರೆದುಕೊಟ್ಟಿದ್ದರು.

ಭಾನುವಾರ ಶೂಟಿಂಗ್‌ನಲ್ಲಿ ರಮಿತಾ ಜಿಂದಾಲ್ ಅವರೂ ಫೈನಲ್ ಪ್ರವೇಶಿಸುವ ಮೂಲಕ ಪದಕ ಜಯದ ಭರವಸೆ ಮೂಡಿಸಿದರು. ಬಾಕ್ಸಿಂಗ್‌ನಲ್ಲಿ ನಿಖತ್ ಜರೀನ್, ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ. ಸಿಂಧು ಹಾಗೂ ಟೇಬಲ್ ಟೆನಿಸ್‌ನಲ್ಲಿ ಮಣಿಕಾ ಬಾತ್ರಾ ಅವರು ತಮ್ಮ ಪಂದ್ಯಗಳಲ್ಲಿ ಗೆಲುವಿನ ಆರಂಭ ಮಾಡಿದರು.

ಫೈನಲ್‌ಗೆ ರಮಿತಾ ಅರ್ಜುನ್

ಪ್ಯಾರಿಸ್: ಭಾರತದ ರಮಿತಾ ಜಿಂದಾಲ್ ಮತ್ತು ಅರ್ಜುನ್ ಬಬುತಾ ಅವರು ಕ್ರಮವಾಗಿ 10 ಮೀ ಏರ್‌ ರೈಫಲ್ ಸ್ಪರ್ಧೆಯ ಮಹಿಳೆ ಹಾಗೂಪುರುಷರ ವಿಭಾಗದ ಫೈನಲ್‌ಗೆ ಪ್ರವೇಶಿಸಿದರು.  ಮಹಿಳೆಯರ ವಿಭಾಗದಲ್ಲಿ ರಮಿತಾ ಅವರ ಅರ್ಹತಾ ಸುತ್ತಿನ್ಲಲಿ ಐದನೇ ಸ್ಥಾನ ಪಡೆದರು. 631.5 ಅಂಕ ಗಳಿಸಿದ ಅವರು ತಮ್ಮದೇ ದೇಶದ ಇಳವೆನಿಲಾ ವಾಳರಿವನ್ (630.7) ಅವರನ್ನು ಹಿಂದಿಕ್ಕಿದರು. ವಾಳರಿವನ್ ಅವರು 10ನೇ ಸ್ಥಾನ ಪಡೆದರು. ಇದರಿಂದಾಗಿ ಫೈನಲ್‌ ಪ್ರವೇಶಿಸಲು ಅವರಿಗೆ ಸಾಧ್ಯವಾಗಲಿಲ್ಲ.  ಪುರುಷರ ವಿಭಾಗದಲ್ಲಿ 25 ವರ್ಷದ ಅರ್ಜುನ್ ಬಬುತಾ  ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಪಡೆದು ಫೈನಲ್‌ಗೆ ಲಗ್ಗೆ ಇಟ್ಟರು.  ಅವರು 630.1 ಪಾಯಿಂಟ್ಸ್‌ (105.7 104.9 105.5 105.4 104.0 ಮತ್ತು 104.6) ಕಲೆಹಾಕಿದರು. ಚಂಡೀಗಡದ ಅರ್ಜುನ್ ಅವರು ಸೋಮವಾರ ನಡೆಯಲಿರುವ ಫೈನಲ್‌ನಲ್ಲಿ  ಸ್ಪರ್ಧಿಸುವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT